ಪುತ್ತೂರು: ನಗರದ ನಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದಾರೆ.
ಪುತ್ತೂರು: ನಾವಿಂದು ಕೃತಕ ಬುದ್ಧಿಮತ್ತೆಯ ಕಾಲದಲ್ಲಿದ್ದೇವೆ. ಎಐ ಎಂಬುದು ನಾವು ಮಾಹಿತಿಯನ್ನು ತುಂಬಿದ ವ್ಯವಸ್ಥೆಯೇ ಹೊರತು ಅದಾಗಿಯೇ ಹುಟ್ಟಿದಂತಹದ್ದಲ್ಲ. ಆದರೆ ನಾವಿಂದು ತುಂಬಿದ ಮಾಹಿತಿಯನ್ನು ನೋಡಿ ಬೆರಗಾಗುತ್ತಿದ್ದೇವೆಯೇ ವಿನಃ ನಮ್ಮೊಳಗಿನ ಶಕ್ತಿಯನ್ನು ಗುರುತಿಸುತ್ತಿಲ್ಲ. ಹಾಗಾಗಿ ಭಗವಂತ ನಮಗೆ ಕೊಟ್ಟಿರುವ ಸಾಮರ್ಥ್ಯವನ್ನು ವಿಮರ್ಶಿಸಬೇಕಲ್ಲದೆ, ನಮ್ಮ ಮುಂಡದ ಶಕ್ತಿಯ ಅಗಾಧತೆಯನ್ನು ಅರಿಯಬೇಕು ಎಂದು ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎಂ.ನರಸಿಂಹ ಮೂರ್ತಿ ಹೇಳಿದರು.
ಪುತ್ತೂರು: ಈಗಿನ ದಿನಮಾನಗಳಲ್ಲಿ ಸೈನ್ಯದ ಎಲ್ಲಾ ವಿಭಾಗಗಳಲ್ಲೂ ಸೈನಿಕರ ಪ್ರಾಣಕ್ಕೆ ಅಪಾಯವಾಗದಂತೆ ತಡೆಯಲು ತಂತ್ರಜ್ಞಾನ ಸಹಾಯಕವಾಗಿದೆ. ಸೈನಿಕರ ಪ್ರಾಣಕ್ಕೆ ತೊಂದರೆಯಾಗಬಾರದೆನ್ನುವ ಕಾರಣದಿಂದ ಕರ್ತವ್ಯದ ಸಮಯದಲ್ಲಿ ಸೈನಿಕರು ಎಲ್ಲಿದ್ದರೂ ಮಿಲಿಟರಿ ವ್ಯವಸ್ಥೆಗೆ ಸೂಚನೆ ಸಿಗುವ ತಂತ್ರಜ್ಞಾನವಿದೆ ಎಂದು ದೇಶದ ಗಡಿ ಭದ್ರತಾ ಪಡೆಯಲ್ಲಿ ಸತತವಾಗಿ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಜುಲೈ 31 ರಂದು ನಿವೃತ್ತಿ ಹೊಂದಿ ಮರಳಿ ಊರಿಗೆ ಆಗಮಿಸಿದ ಸುಂದರ ಪೂಜಾರಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದೇಶಸೇವೆ ಮಾಡಲು ಸೈನ್ಯಕ್ಕೆ ಸೇರುವುದು ಒಂದು ಉತ್ತಮ ಸಾಧ್ಯತೆ. ಹಾಗೆಂದು ಸೈನ್ಯಕ್ಕೆ ಸೈನಿಕರಾಗಿಯೇ ಸೇರಬೇಕೆಂದಿಲ್ಲ. ವೈದ್ಯರಾಗಿಯೂ, ಅಭಿಯಂತರರಾಗಿಯೂ, ತಂತ್ರಜ್ಞರಾಗಿಯೂ ಕೂಡ ಸೇವೆಯನ್ನು ಸಲ್ಲಿಸಲು ಅವಕಾಶಗಳಿವೆ ಎಂದರಲ್ಲದೆ ತಮ್ಮ ದೀರ್ಘಕಾಲದ ಅನುಭವದ ಸಾರವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ತರಗತಿ ವಿದ್ಯಾರ್ಥಿನಿ ದೃಶಾನ ಎಸ್. ಸರಳಿಕಾನ ಇವರು ಚಿಕ್ಕಮಗಳೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ -55 ವಿಭಾಗದ ಟೇಕ್ವಾಂಡೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬೆಟ್ಟಂಪಾಡಿ ನಿವಾಸಿ ಸುರೇಶ್ ಗೌಡ ಸರಳಿಕಾನ ಹಾಗೂ ವಿದ್ಯಾಶ್ರೀ ಸರಳಿಕಾನ ದಂಪತಿ ಪುತ್ರಿ.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆಯಲ್ಲಿ ಮಂಗಳವಾರ ‘ಹಿಂದಿ ದಿವಸ್’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಹತ್ತನೇ ತರಗತಿಯ ಹಿಂದಿ ವಿದ್ಯಾರ್ಥಿಗಳು ವಿಶೇಷ ಲಘು ನಾಟಕ ಪ್ರದರ್ಶಿಸಿದರು. ಹಿಂದಿಯ ಪ್ರಸಿದ್ಧ ಸಂತರಾದ ರಹೀಮ್ ಹಾಗೂ ಕಬೀರ್ ಅವರ ಆಧುನಿಕ ಗಣಕಯಂತ್ರ ಯುಗದ ಶಾಲಾ ವಾತಾವರಣಕ್ಕೆ ಪಾದಾರ್ಪಣೆ ಮಾಡಿದರೆ ಹೇಗಿರುತ್ತದೆ? ಎಂಬುದರ ನಾಟಕವನ್ನು ರೂಪಿಸಲಾಗಿತ್ತು.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ವಿದ್ಯಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಸಾಂಪ್ರದಾಯಿಕವಾಗಿ ನಡೆಯಿತು.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ವಿದ್ಯಾಲಯದ ವಿದ್ಯಾರ್ಥಿಗಳು ಬೆಂಗಳೂರಿನ ರಾಮಮೂರ್ತಿ ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ರಾಜ್ಯ ಮತ್ತು ಕ್ಷೇತ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿ ಹಲವು ಪದಕಗಳನ್ನು ಗೆಲ್ಲುವ ಜೊತೆಗೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ
ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ
ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಹಲವು
ಪದಕಗಳನ್ನು ಗಳಿಸಿದ್ದಾರೆ.
ಪರ್ಲಡ್ಕದ ಉಮಾಶಂಕರ್ ನಾಯಕ್ ಕೆ. ಮತ್ತು ರಶ್ಮಿ ಅವರ ಪುತ್ರ, ಕಿಶೋರ ವರ್ಗದ ಬಾಲಕರ ವಿಭಾಗದಲ್ಲಿ, 10ನೇ ತರಗತಿಯ ಲಲನ್ ಯು. ನಾಯಕ್ ಅವರು 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೂರನೇಯ ಸ್ಥಾನ, 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೊದಲನೇಯ ಸ್ಥಾನ ಹಾಗೂ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಎರಡನೇ ಸ್ಥಾನ ಗಳಿಸಿದರು.
ಹಾರಾಡಿಯ ಮಧುಸೂದನ್ ಸಾಲೆ ಮತ್ತು ವಿನುತಾ ಎಂ. ಸಾಲೆ ಅವರ ಪುತ್ರ, 10ನೇ ತರಗತಿಯ ಅನಿತೇಜ್ ಮಧುಸೂದನ್ ಸಾಲೆ ಅವರು 800 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೊದಲನೇ ಸ್ಥಾನ ಹಾಗೂ 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮೂರನೇಯ ಸ್ಥಾನ ಪಡೆದರು.
ಪುತ್ತೂರಿನ ರವಿಕುಮಾರ್ ಕೊಠಾರಿ ಮತ್ತು ಲಕ್ಷ್ಮಿ ಬೆನ್ ರವಿಕುಮಾರ್ ಅವರ ಪುತ್ರಿ ಕಿಶೋರ ವರ್ಗದ ಬಾಲಕಿಯ ವಿಭಾಗದಲ್ಲಿ 10ನೇ ತರಗತಿಯ ಮೆಹಕ್ ರವಿಕುಮಾರ್ ಅವರು 200 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮೊದಲನೇ ಸ್ಥಾನ ಹಾಗೂ 4×100 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಎರಡನೇ ಸ್ಥಾನ ಹಾಗೂ ದರ್ಬೆಯ ಪ್ರಸನ್ನ ಶೆಟ್ಟಿ ಮತ್ತು ಪ್ರತಿಮಾ ಅವರ ಪುತ್ರಿ 8ನೇ ತರಗತಿಯ ರೀಶಾ ಪಿ. ಶೆಟ್ಟಿ ಅವರು 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಮೂರನೇ ಸ್ಥಾನ ಪಡೆದರು.
೧೩ ಮಂದಿ ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ, ೨೧ ವಿದ್ಯಾರ್ಥಿಗಳಿಗೆ ಪ್ರಥಮ ಶ್ರೇಣಿ ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆಯೋಜಿಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಭಾಗವಹಿಸಿ ವಿಶಿಷ್ಟ ಶ್ರೇಣಿ ಹಾಗೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉತ್ತಮ ಸಾಧನೆಯನ್ನು ಮಾಡಿರುತ್ತಾರೆ. ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್‌ನಲ್ಲಿ ಈ ಪರೀಕ್ಷೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆಯು ಕಿರಿಯ ದರ್ಜೆ ಹಾಗೂ ಹಿರಿಯ ದರ್ಜೆ ವಿಭಾಗಗಳಲ್ಲಿ ನಡೆದಿದ್ದು, ಅಂಬಿಕಾ ವಿದ್ಯಾಲಯದಿಂದ ಒಟ್ಟು ೩೪ ವಿದ್ಯಾರ್ಥಿಗಳು ಭಾಗವಹಿಸಿ, ೧೩ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕಿರಿಯ ದರ್ಜೆಯಲ್ಲಿ, ಏಳನೇ ತರಗತಿಯ ಪೃಥ್ವಿಕ್ ಟಿ, ಅಶ್ನಿತ್ ರಂಜನ್, ಆರ್ಯಮೋಹನ್, ಸನ್ಮಯ್ ಎನ್., ಸೌಪರ್ಣಿಕ ದಾನೆಗೊಂಡರ್, ಮನಿಷಾ ಕಜೆ ವಿಶಿಷ್ಟ ಶ್ರೇಣಿ ಪಡೆದರೆ, ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾದ ಬಿ. ತ್ರಿಶಾ, ಸಾನ್ವಿ ಆರ್, ಆರುಶ್ ರಾವ್, ಇಶಾನಿ ಭಟ್, ಸಾನ್ವಿ, ವಂಶಿಕ ಬಿ. ರೈ ಹಾಗೂ ಇಂಚರ ಎಸ್. ಮಯ್ಯ ಹಿರಿಯ ದರ್ಜೆಯಲ್ಲಿ ವಿಶಿಷ್ಟ ಶ್ರೇಣಿಗೆ ಭಾಜನರಾಗಿದ್ದಾರೆ. ಉಳಿದಂತೆ ಕಿರಿಯ ದರ್ಜೆಯಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದರೆ, ಹಿರಿಯ ದರ್ಜೆಯಲ್ಲಿ ಹದಿಮೂರು ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಂಬಿಕಾ ವಿದ್ಯಾಲಯದ ಚಿತ್ರಕಲಾ ಶಿಕ್ಷಕಿ ಕೆ. ಜಯಲಕ್ಷ್ಮಿ ಮಾರ್ಗದರ್ಶನ ನೀಡಿರುತ್ತಾರೆ.
ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಯುವದಿನಾಚರಣೆ ಕಾರ್ಯಕ್ರಮ ಪ್ರಾಮಾಣಿಕವಾದ ದೇಶಭಕ್ತಿ ಮೂಡಿಬರಬೇಕು : ಶ್ರೀಕೃಷ್ಣ ಉಪಾಧ್ಯಾಯ
ಪುತ್ತೂರು : ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನ ಎಂದು ಕರೆಯುವುದಕ್ಕೆ ಕಾರಣವಿದೆ. ದೇಶವನ್ನು ಕಟ್ಟುವ ನಿಟ್ಟಿನಲ್ಲಿ ವಿವೇಕಾನಂದರು ಕರೆಯನ್ನು ಕೊಡುವ ಸಂದರ್ಭದಲ್ಲಿ ಅವರು ಕೇಳಿದ್ದು ಉಕ್ಕಿನ ನರಮಂಡಲ ಇರುವ ವಿದ್ಯುತ್ತಿನ ಶಕ್ತಿಯಷ್ಟು ಪ್ರಬಲವಾದ, ಚೈತನ್ಯದಿಂದ ಕೂಡಿದ ನೂರು ಜನ ಯುವಕರನ್ನು. ಹಾಗಾಗಿಯೇ ಅವರ ಜನ್ಮ ದಿನವನ್ನು ಯುವ ದಿನಾಚರಣೆ ಎಂದು ಗುರುತಿಸಲಾಗುತ್ತದೆ ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ತೆಯಲ್ಲಿ ಸೋಮವಾರದಂದು ನಡೆದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿ ಪ್ರಯುಕ್ತದ ಯುವ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬಾವುಟವನ್ನು ಹಾರಿಸಿ, ಘೋಷಣೆಗಳನ್ನು ಕೂಗಿ, ಮೆರವಣಿಗೆಯನ್ನು ತೋರಿಕೆಗಾಗಿ ಮಾಡಿದರೆ ಅದು ದೇಶಭಕ್ತಿ ಎಂದೆನಿಸಿಕೊಳ್ಳುವುದಿಲ್ಲ. ಅಂತೆಯೇ ಭಾಷಣವನ್ನು ಕೇಳಿ ಚಪ್ಪಾಳೆಯನ್ನು ತಟ್ಟುವುದು ಕೂಡ ಇದಕ್ಕೆ ಹೊರತೇನಲ್ಲ, ಅದರ ಬದಲಿಗೆ ಆ ವಿಷಯಗಳಿಂದ ಪ್ರೇರಣೆ ಮೂಡಿ ಕಾರ್ಯಕ್ಕೆ ತೊಡಗಬೇಕು. ನಿಜವಾದ ದೇಶಭಕ್ತಿ ಎಂದರೆ ದೇಶವನ್ನು ಕಟ್ಟುವುದು ಎಂದರ್ಥ. ಪೊಲೀಸ್, ವೈದ್ಯ, ಶಿಕ್ಷಕ, ರಾಜಕಾರಣಿ ಹೀಗೆ ಹಲವು ಉದ್ಯೋಗಗಳಿವೆ, ಇವರೆಲ್ಲರೂ ತಮ್ಮ ವೃತ್ತಿಯನ್ನು ಸ್ವಚ್ಛ ಮನಸ್ಸಿನಿಂದ, ಪ್ರಾಮಾಣಿಕತೆಯನ್ನು ಮೆರೆದರೆ ಅದೇ ನಾವು ದೇಶಕ್ಕೆ ಕೊಡುವ ಕೊಡುಗೆಯಾಗಿದೆ. ಇದೇ ನಿಜವಾದ ದೇಶಭಕ್ತಿ ಎಂದು ತಿಳಿಸಿದರು.
ವಿವೇಕಾನಂದರು ಹೇಳಿದ ೪ ತತ್ವಗಳಾದ ವ್ರತದ ಪಾಲನೆ, ದೇಹದಲ್ಲಿ ಶಕ್ತಿ, ಬೌದ್ಧಿಕ ಶಕ್ತಿ, ಸಂಸ್ಕಾರ ತತ್ವ ಇವುಗಳು ವಿದ್ಯಾರ್ಥಿ ಜೀವನಕ್ಕೆ ತುಂಬಾ ಮುಖ್ಯ ಎಂದರಲ್ಲದೆ ಗುರು ಭಕ್ತಿ ಇಲ್ಲದೆ ವಿದ್ಯೆಯು ಒಲಿಯುವುದಿಲ್ಲ. ಮಾತೆ ಹಾಗೂ ಮಾತೃಭೂಮಿಯನ್ನು ಪ್ರೀತಿಸಬೇಕು. ಪರಂಪರೆಯನ್ನು ಬೆಳಗಿಸಬೇಕು. ದೇವರ ಮೇಲೆ ಭಕ್ತಿ, ಶ್ರದ್ಧೆ, ಸಂಸ್ಕಾರ, ಒಳ್ಳೆಯ ಮನಸ್ಸು ಇರಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ. ಮಾತನಾಡಿ ವಿದ್ಯೆ, ಬದುಕು ಇದರ ಬಗ್ಗೆ ಕಾಳಜಿಯನ್ನು ವಹಿಸಬೇಕು. ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳುವಲ್ಲಿ ಸ್ವಾಮಿ ವಿವೇಕಾನಂದರ ಮೌಲ್ಯಗಳು ನಮಗೆ ಪ್ರೇರಣೆಯಾಗಬೇಕು. ಪ್ರತಿನಿತ್ಯವೂ ನಾಡಿನ ಸಂತರ ಕಥೆಯನ್ನು ಓದಿ, ಕೇಳಿ ಅವರ ಪ್ರೇರಣಾತ್ಮಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಚೆನ್ನಾಗಿ ಕಟ್ಟಿಕೊಳ್ಳುವುದರ ಮೂಲಕ ಮಾನವ ಜನ್ಮವನ್ನು ಸಾರ್ಥಕ ಗೊಳಿಸಬೇಕು ಎಂದರು.
ವಿದ್ಯಾರ್ಥಿನಿ ಪ್ರಾರ್ಥನಾ ವಿವೇಕಾನಂದರ ಜೀವನ ಮೌಲ್ಯದ ಕುರಿತು ತಿಳಿಸಿದರು. ಚಿಕಾಗೋ ಸಮ್ಮೇಳನದ ಸನ್ನಿವೇಶವನ್ನು ಶ್ರೀಯಂ ಕೆ.ಎಸ್ ಇವರು ಸ್ವಗತದ ರೂಪದಲ್ಲಿ ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಾದ ಸನ್ಮಯ್ ಎನ್, ಶ್ರೀರಾಮ, ಶೌರಿ, ಮೋಕ್ಷ್, ಯಶಸ್ ಮಯೂರ್, ಮಯಾಂಕ್, ಪ್ರದ್ವಿನ್ ಇವರು ವಿವೇಕಾನಂದರ ಕುರಿತು ಸಮೂಹ ಗಾನವನ್ನು ಹಾಡಿದರು. ವಿದ್ಯಾರ್ಥಿ ಶ್ರೀವತ್ಸ ಸ್ವಾಗತಿಸಿ, ವಿದ್ಯಾರ್ಥಿನಿ ಲಾವಣ್ಯ ಪಟ್ಟೆ ವಂದಿಸಿದರು. ವಿದ್ಯಾರ್ಥಿ ಆದಿಶ್ರೀ ಪ್ರಾರ್ಥಿಸಿ, ಮನಿಷಾ ಕಜೆ ಹಾಗೂ ಕೀರ್ತಿಕಾ ಕಾರ್ಯಕ್ರಮವನ್ನು ನಿರ್ವಹಿಸಿದರು.